ನೃಪತುಂಗ ಬೆಟ್ಟ (ಧರೆಗಿಳಿದ ಸ್ವರ್ಗ)
ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಟಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ.ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ.
ಹುಬ್ಬಳ್ಳಿಯಲ್ಲಿ ರೈಲು.ವಿಮಾನ,ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ.
ಇಂಥಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಧರೆಗಿಳಿದ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿರುವ ನೃಪತುಂಗ ಬೆಟ್ಟಕ್ಕೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡತೆ. ಅಷ್ಟೇ ಅಲ್ಲ ಪರಿಸರಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.
ಹುಬ್ಬಳ್ಳಿಯ ಡಾ:ಗೋವಿಂದ ಮಣ್ಣೂರ ಎಂಬುವರ ಹೆಸರಿರುವ ಫಲಕವೊಂದರಲ್ಲಿನ ಈ ಸಾಲುಗಳು ನೃಪತುಂಗ ಬೆಟ್ಟದ ಕುರಿತು ಈ ರೀತಿ ಹೇಳುತ್ತವೆ.
ಹತ್ತು ಬಾವಿಗಳಿಗೆ ಒಂದು ಕೆರೆ ಸಮ
ಹತ್ತು ಕರೆಗಳಿಗೆ ಒಂದು ಸರೋವರ ಸಮ
ಹತ್ತು ಸರೋವರಗಳಿಗೆ ಒಂದು ಸಾಗರ ಸಮ
ಹತ್ತು ಸಾಗರಗಳಿಗೆ ಒಬ್ಬ ಸತ್ಪುರುಷ ಸಮ
ಹತ್ತು ಸತ್ಪುರುಷರಿಗೆ ಒಬ್ಬ ಹೆತ್ತ ತಾಯಿ ಸಮ
ಹತ್ತು ತಾಯಂದಿರಿಗೆ ಒಂದು ಮರ ಸಮ
ನೃಪತುಂಗ ಬೆಟ್ಟ ಧರೆಗಿಳಿದ ಸ್ವರ್ಗದ ತುಣುಕು
ಇಲ್ಲಿ ಮಾಡಬೇಡಿ ಕೊಳಕು
ಎಂಬ ಸಂದೇಶ ಇಲ್ಲಿ ಅಳವಡಿಸಿರುವರು.ಅಂದ ಹಾಗೆ ಹುಬ್ಬಳ್ಳಿ, ಬೆಂಗಳೂರಿನಿಂದ 400 ಕಿ.ಮೀ. ಧಾರವಾಡದಿಂದ 20 ಕಿ.ಮೀ.ಬೆಳಗಾವಿಯಿಂದ 85 ಕಿ.ಮೀ ವಾಣಿಜ್ಯ ಕೇಂದ್ರ ಛೋಟಾ ಮುಂಬಯಿ ಎಂದೂ ಹುಬ್ಬಳ್ಳಿಯನ್ನು ಕರೆಯುತ್ತಾರೆ.ಇದು ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರಲ್ಲಿ ಬರುವುದು.ಅಷ್ಟೇ ಅಲ್ಲ ಕಾರವಾರ ಬಂದರು ಕೂಡ ಇಲ್ಲಿಂದ 165 ಕಿ.ಮೀ ಅಂತರವಿದ್ದು ಒಂದೆಡೆ ನೈರುತ್ಯ ರೈಲ್ವೆ ವಲಯ. ಮತ್ತೊಂದೆಡೆ ವಿಮಾನ ನಿಲ್ದಾಣ. 46 ವಾರ್ಡ ಹೊಂದಿದ ಮಹಾನಗರ ಪಾಲಿಕೆ.1997 ರಿಂದ ವಾಯುವ್ಯ ಸಾರಿಗೆ ಸಂಸ್ಥೆಯನ್ನು ಹೊಂದುವ ಮೂಲಕ ರಾಜ್ಯದ ಎಲ್ಲ ಮಾರ್ಗಗಳಿಂದಲೂ ರಸ್ತೆ ಸಾರಿಗೆ ಸಂಪರ್ಕ ಹೊಂದಿದೆ.
ಹುಬ್ಬಳ್ಳಿ-ಧಾರವಾಡ ನಡುವೆ ಅವಳಿನಗರಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‍ಗಳಲ್ಲಿ ದಿನಕ್ಕೆ 55 ರೂಪಾಯಿಗಳ ರಿಯಾಯತಿ ಪಾಸ್ ಸೌಲಭ್ಯವುಂಟು ಇದನ್ನು ಪಡೆದರೆ ಸಾಕು ಹುಬ್ಬಳ್ಳಿ ಧಾರವಾಡವನ್ನು ಒಂದು ದಿನದ ಮಟ್ಟಿಗೆ ಎಲ್ಲೆಂದರಲ್ಲಿ ನಗರ ಸಾರಿಗೆ ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಒಟ್ಟಾರೆ ಹುಬ್ಬಳ್ಳಿಗೆ ರಸ್ತೆ,ರೈಲು,ವಿಮಾನ ಯಾವುದೇ ಮಾರ್ಗದ ಮೂಲಕ ಬಂದಿಳಿದರೂ ಕೂಡ ನಗರ ಸಾರಿಗೆ ಬಸ್ ಮೂಲಕ ನೃಪತುಂಗ ಬೆಟ್ಟ ತಲುಪಲು ಅನುಕೂಲತೆಗಳಿವೆ. ನಗರ ಸಾರಿಗೆ ಬಸ್‍ಗಳಾದ ಶಿರಡಿನಗರ,ವಿಶ್ವೇಶ್ವರ ನಗರ,ಪರ್ತಕರ್ತರ ನಗರ,ಶಕ್ತಿ ನಗರ ಬಸ್‍ಗಳು ಸಬ್ ಜೈಲ್(ಕಾರಾಗೃಹ) ಹತ್ತಿರದ ಬಸ್ ನಿಲುಗಡೆಯಲ್ಲಿ ನಿಂತು ಹೋಗುತ್ತವೆ. ಅಲ್ಲಿಂದ ಬೆಟ್ಟಕ್ಕೆ ಅರ್ಧ ಕಿಲೋ ಮೀಟರ್‍ನಷ್ಟು ನಡೆದು ಬರಬೇಕು. ಇಲ್ಲವೇ ಅಲ್ಲಿ ನಿಂತಿರುವ ಅಟೋ ಮೂಲಕವೂ ಬರಬಹುದು.
ಹೀಗೆ ಬಂದೊಡನೆ ಮರದ ದಿಂಡಿನಿಂದ ಮಾಡಿದ ಆಕರ್ಷಕ ಸುಸ್ವಾಗತ ಫಲಕ ಅದರ ಪಕ್ಕದಲ್ಲಿ ಪ್ರವೇಶಕ್ಕೆ ಟಿಕೀಟು ಕೌಂಟರ್ ಕಾಣತೊಡಗುತ್ತವೆ. ಇಲ್ಲಿ 12 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಹತ್ತು ರೂಪಾಯಿ ದರ ನಿಗದಿಪಡಿಸಿರುವರು. ಇನ್ನು 3 ರಿಂದ 12 ವರ್ಷ ವಯೋಮಾನದ ಒಳಗಿನ ಮಕ್ಕಳಿಗೆ 5 ರೂಪಾಯಿ ಪ್ರವೇಶ ದರ ಇದೆ. ಇದನ್ನು ಪಡೆದು ಒಳ ನಡೆಯತೊಡಗಿದರೆ ಸಾಗು ಸುಸಜ್ಜಿತವಾದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಎತ್ತರವಾದ ಮರಗಿಡಗಳ ನಡುವೆ ಹುಬ್ಬಳ್ಳಿ ನಗರದ ಸೌಂದರ್ಯ ಕಾಣುತ್ತ ಬಂದರೆ ಸಾಕು ನೃಪತುಂಗ ಬೆಟ್ಟದಲ್ಲಿ ಏನನ್ನು ವೀಕ್ಷಿಸಲು ಸಾಧ್ಯ ಎಂಬ ನಾಮಫಲಕ ಗಮನ ಸೆಳೆಯುತ್ತದೆ.
ಇಲ್ಲಿ ಸಾಂಸ್ಕøತಿಕ ವೇದಿಕೆ,ಉಪಹಾರ ಗೃಹ,ಚಿಕ್ಕ ಮಕ್ಕಳ ಉದ್ಯಾನವನ,ಜಲಪಾತ,ನೀರಿನ ಚಿಲುಮೆ. ಕಾಜೀ ಪೀರಜಾದೆ ದರ್ಗಾ,ಎರಡು ಧ್ಯಾನ ಮಂದಿರಗಳು, ಸಂತ ರೇವು ಮಾತಾ ಮಂದಿರ, ಜಿಂಕೆವನ,ಇವೆಲ್ಲವುಗಳಿಗೆ ಯಾವ ಮಾರ್ಗದಿಂದ ಸಂಚರಿಸಬಹುದು ಎಂಬ ಮಾರ್ಗಸೂಚಿ ಹೊಂದಿದ ಪ್ರಕಟಣಾ ಫಲಕ ನೋಡಿದರೆ ಸಾಕು ಇಡೀ ಬೆಟ್ಟವನ್ನು ನಾವು ಯಾವ ರೀತಿ ಸುತ್ತಲು ಸಾಧ್ಯ ಎಂದು ಯೋಜನೆ ಮಾಡಬಹುದು. ಮಕ್ಕಳೊಂದಿಗೆ ಬಂದಿದ್ದಲ್ಲಿ ಪ್ರಕಟಣಾ ಫಲಕದ ಎದುರಿಗೆ ಮಕ್ಕಳ ಉದ್ಯಾನವನವಿದೆ. ಅಲ್ಲಿ ಎದುರಿಗೆ ಎರಡು ಹಿಮಕರಡಿಗಳಿವೆ.ಇವು ಒಂದಕ್ಕೊಂದು ತಮ್ಮ ತಮ್ಮಲ್ಲಿ ಕಚ್ಚಾಡಲು ತಯಾರಾಗಿವೆಯೇನೋ ಎಂಬಂತೆ ಕಾಣುತ್ತಿವೆ ಹಾಗೆಂದುಕೊಂಡು ಹತ್ತಿರ ಬಂದರೆ ಅವು ಪ್ರತಿಕೃತಿಗಳು ಎಂದು ಗೊತ್ತಾಗುತ್ತದೆ.ಅಲ್ಲಿರುವ ಹುಲ್ಲುಹಾಸಿನಲ್ಲಿ ಕೆಲವು ಬಾತುಕೋಳಿಗಳು ತಮ್ಮಷ್ಟಕ್ಕೆ ತಾವು ಅಡ್ಡಾಡುತ್ತಿವೆ ಪಕ್ಕದ ಮೆಟ್ಟಿಲು ಹತ್ತುವ ಮುನ್ನ ಜಲದೇವಿ ತನ್ನ ಕೊಡದಲ್ಲಿ ನೀರನ್ನು ಹರಿ ಬಿಡುತ್ತಿರುವ ಕಲಾತ್ಮಕ ದೃಶ್ಯ ಮನತುಂಬಿಕೊಂಡು ಮಕ್ಕಳ ಉದ್ಯಾನಕ್ಕೆ ಕಾಲಿಟ್ಟರೆ ಇಲ್ಲಿಯೂ ಕೂಡ ಒಂದು ಸೂಚನೆಯಿದೆ ಇದು ಕೇವಲ ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಎಂಬುದು .ಕಾರಣವಿಷ್ಟೇ ಇಲ್ಲಿ ಅಳವಡಿಸಿರುವ ತೂಗು ಜೋಕಾಲಿ,ಜಾರು ಬಂಡೆಯಂತಹ ಆಟಿಕೆ ವಸ್ತುಗಳ ಮೇಲೆ ಹೆಚ್ಚಿನ ಭಾರ ಬೀಳದಿರಲಿ, ನಿಮ್ಮ ಮಕ್ಕಳನ್ನು ಅವರಷ್ಟಕ್ಕೆ ಅವರನ್ನು ಬಿಡಿ ಅವರು ಆಡಿಕೊಂಡಿರಲಿ,ನೀವು ಅಲ್ಲಿ ಹಾಕಿರುವ ಕಲಾತ್ಮಕ ಕಲ್ಲು ಬೆಂಚುಗಳ ಮೇಲೆ ಕುಳಿತು ಸುಮ್ಮನೆ ನೋಡಿ ಇಲ್ಲವೇ ಇಲ್ಲಿಯೂ ನವಿಲು,ಜಲಕುಂಭದ ದೇವಿ ಇತ್ಯಾದಿ ಮೂರ್ತಿಗಳ ಪ್ರತಿಕೃತಿಗಳಿವೆ ಗಿಡಮರಗಳ ಸೌಂದರ್ಯ ರಾಶಿಯಿದೆ.ಇಂಥವುಗಳನ್ನು ಸವಿಯಿರಿ.
ಮಕ್ಕಳು ಆಡಿ ಸುಸ್ತಾದ ಕೂಡಲೇ ಎದುರಿನ ಉಪಹಾರವನಕ್ಕೆ ಬನ್ನಿ ಉತ್ತಮ ಗುಣಮಟ್ಟದ ತಿಂಡಿತಿನಿಸುಗಳ ಲಭ್ಯತೆ ಇಲ್ಲಿದೆ. ಅಲ್ಲಿಯೇ ಕುಳಿತು ಅದರ ಸವಿ ಸವಿಯಿರಿ.ಇಲ್ಲದಿದ್ದಲ್ಲಿ ನೀವೇ ಏನಾದರೂ ತಂದಿದ್ದಲ್ಲಿ ಹತ್ತಿರವಿರುವ ಹಂಚುಹಾಸಿನ ಗುಡಿಸಿಲಿನ ಮಾದರಿ ವಿಶ್ರಾಂತಿಧಾಮಕ್ಕೆ ಬನ್ನಿ ಅಲ್ಲಿ ಅರಾಮವಾಗಿ ವಿಶ್ರಮಿಸುತ್ತ ಜೊತೆಗೆ ತಂದಿರುವ ತಿಂಡಿ ತಿನಿಸುಗಳ ಸವಿ ಸವಿಯಿರಿ.ಜೊತೆಗೆ ಪಕ್ಕದಲ್ಲಿ ಅಳವಡಿಸಿರುವ ಶುಚಿ-ರುಚಿಯಾದ ನೀರು ಕುಡಿದು.ಅಲ್ಲಿಯೇ ಇರಿಸಿರುವ ಗೋರಿಲ್ಲಾಗಳ ಪ್ರತಿಕೃತಿಗಳಲ್ಲಿ ಕಸವನ್ನು ವಿಲೇವಾರಿ ಮಾಡಿ ಅವುಗಳು ಕೂಡ ನಿಮ್ಮ ಕಸವನ್ನು ಇಲ್ಲಿ ಹಾಕಿ ಎಂಬ ಸಂದೇಶವನ್ನು ಹೊತ್ತು ನಿಂತಿವೆ.ಕಾರಣ ಇಷ್ಟೇ ಇಂಥ ಪ್ರಕೃತಿ ತಾಣಗಳಿಗೆ ಎಲ್ಲಿಯೇ ಹೋಗಲಿ ಅಲ್ಲಿ ಪರಿಸರ ಕಾಳಜಿಯಿಂದ ಮಾಡಿರುವ ಸೂಚನೆ ಅನುಸಾರವಾಗಿ ನಡೆಯಬೇಕಾದದ್ದು ಎಲ್ಲರ ಕರ್ತವ್ಯ.ಈ ಬೆಟ್ಟದ ಯಾವುದೇ ಸ್ಥಳದಲ್ಲಿ ಸಂಚರಿಸಿ ಹುಲ್ಲುಹಾಸಿನ ನಡುವೆ ಅಲ್ಲಲ್ಲಿ ಪರಿಸರ ಕಾಳಜಿಯ ಸಂದೇಶಗಳು ಗಮನ ಸೆಳೆಯುತ್ತವೆ.
ಮರ ನೆಟ್ಟು ಬರ ಅಟ್ಟು, ಸಮಸ್ತ ಜೀವರಾಶಿ ಉಳಿವಿಗೆ ಅರಣ್ಯಗಳು ಅತಿ ಅವಶ್ಯಕ. ಇತ್ಯಾದಿ ಪರಿಸರ ಸಂರಕ್ಷಣೆಯ ಮಹತ್ವ ಸಾರಿದರೆ ಪಾದಚಾರಿಗಳಿಗಾಗಿ ವಿಶೇಷ ವಿನ್ಯಾಸದ ಮಾರ್ಗ ಎಡಬಲಗಳಲ್ಲಿ ಮರದ ದಿಮ್ಮೆ ಬಳಸಿ ಕಲಾತ್ಮಕ ಕಟೌಟಗಳಂತೆ ಕಂಗೊಳಿಸುವ ಗೋಡೆ ಶೈಲಿಯ ಕಲಾತ್ಮಕತೆ ಎಲ್ಲಿ ನೋಡಿದರೂ ಹಸಿರು.ಇಡೀ ಹುಬ್ಬಳ್ಳಿಯ ಎಲ್ಲ ರೀತಿಯ ಸ್ಥಳಗಳನ್ನು ಎತ್ತರದ ವೀಕ್ಷಣಾ ಗೋಪುರದಲ್ಲಿ ಎಲ್ಲ ದಿಕ್ಕುಗಳಲ್ಲಿ ಕಾಣುವ ಅವಕಾಶ ಇಲ್ಲಿದೆ.
ದಿನನಿತ್ಯದ ಸಂಸಾರದ ಜಂಜಾಟ,ಕೆಲಸದ ನಡುವೆ ಒಂದಿಷ್ಟು ರಿಲಾಕ್ಸ ಬೇಕಿದ್ದಲ್ಲಿ ಇಂಥಹ ಸ್ಥಳಗಳಿಗೆ ಕುಟುಂಬ ಸಹಿತ ಬರುವುದು ಒಳ್ಳೆಯದು. ಇದು ಉಲ್ಲಾಸ,ಸಂತೋಷದ ಜೊತೆಗೆ ಹಿತಕರವಾದ ವಾತಾವರಣದಲ್ಲಿ ತಾಜಾ ಗಾಳಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಬೆಟ್ಟಕ್ಕೆ ಪ್ರವೇಶ ಬೆಳಗಿನ 9 ರಿಂದ ಮದ್ಯಾಹ್ನ 1-30 ರ ವರೆಗೆ ನಂತರ 2 ರಿಂದ ಸಂಜೆ 8-30 ರ ವರೆಗೆ ಇದ್ದು ಇದರ ಜೊತೆಗೆ ಬೆಟ್ಟದ ಸುತ್ತ ಮುತ್ತ ವಾಸಿಸುತ್ತಿರುವ ಜನರ ಬೆಳಗಿನ ವಾಯುವಿಹಾರಕ್ಕಾಗಿ ಪ್ರಾತಃಕಾಲ 5 ರಿಂದ 8.30 ರವರೆಗೂ ಅವಕಾಶ ಕಲ್ಪಿಸಲಾಗಿದ್ದು ಕೂಡ ವಿಶೇಷ.ಹಾಗಾದರೆ ಇನ್ನೇಕೆ ತಡ ಹುಬ್ಬಳ್ಳಿಗೆ ಯಾವುದಾದರೂ ಕೆಲಸಕ್ಕೆ ಬರುವುದಾದರೆ ಅಥವ ಉದ್ದೇಶಪೂರ್ವಕವಾಗಿ ಸ್ವಲ್ಪ ಬಿಡುವಿನ ವೇಳೆ ಕಳೆಯಬಯಸಿದ್ದಲ್ಲಿ ತಪ್ಪದೇ ನೃಪತುಂಗ ಬೆಟ್ಟಕ್ಕೆ ಬನ್ನಿ ಆನಂದವನ್ನು ಹೊಂದಿ.
For more information watch video:
--------END-------
No comments:
Post a Comment